ಶರ್ಮರ ಬಗ್ಗೆ

ವೇ|ಬ್ರಂ|ಶ್ರೀ ಬಿ. ವೆಂಕಟರಾಮಶರ್ಮರವರು ಮೈಸೂರು ಕಂಡಂತಹ ಅತ್ಯಂತ ಜನಪ್ರಿಯ ಉಪನ್ಯಾಸಕರು ಮತ್ತು ಗ್ರಂಥಕರ್ತೃರು. ೬೦ ವರ್ಷಗಳ ಕಾಲ ಮೈಸೂರಿನ ವಿವಿಧ ದೇವಸ್ಥಾನಗಳಲ್ಲಿ, ಸಂಘ - ಸಂಸ್ಥೆಗಳಲ್ಲಿ ಅಧ್ಯಾತ್ಮಿಕ ವಿಚಾರಧಾರೆಯನ್ನು ಅತ್ಯಂತ ಸರಳ-ಸುಂದರ ಭಾಷೆಯಲ್ಲಿ ಶ್ರೋತೃಗಳಿಗೆ ಮುಟ್ಟಿಸಿದಂತಹ ಧೀಮಂತರು. ಈ ಸರಳತೆ ಸ್ವಾನುಭವದ ಫಲವಾಗಿದ್ದು, ಅತ್ಯಂತ ಕ್ಲಿಷ್ಟ ವಿಷ್ಯಗಳನ್ನೂ ಮನದಟ್ಟಾಗುವಂತಹ ರೀತಿಯಲ್ಲಿ ವಿವರಿಸುತ್ತಿದ್ದರು.

ಶ್ರೋತ್ರೀಯರ ವಂಶದಲ್ಲಿ ಹುಟ್ಟಿ, ವೇ। ಬ್ರಂ। ಶ್ರೀ ವಿಠಲ ಶಾಸ್ತ್ರಿಗಳಿಂದ (ಪ.ಪೂ. ಶ್ರೀ ಜ್ಞಾನಾನಂದೇಂದ್ರ ಸರಸ್ವತಿಗಳು) ಶಂಕರ ಭಾಷ್ಯದ ಪಾಠದ ಭಾಗ್ಯವನ್ನು ಪಡೆದುಕೊಂಡರು. ಹೃಶಿಕೇಶದ ದಿವ್ಯ ಜೀವನ ಸಂಘದ ಸ್ಥಾಪಕರಾದ ಪ. ಪೂ. ಸ್ವಾಮಿ ಶಿವಾನಂದರ ಗ್ರಂಥಗಳಿಂದ ಸ್ಫೂರ್ತಿ ಪಡೆದು, ಕರ್ನಾಟಕದಲ್ಲಿ ದಿವ್ಯ ಜೀವನ ಸಂಘವನ್ನು ಬೆಳೆಸಿದರು. ಮೈಸೂರಿನ ದಿವ್ಯ ಜೀವನ ಮಹಿಳಾ ಸಂಘ ಶಿವಾನಂದ ಜ್ಞಾನಾಲಯ ಇವರ ಶ್ರಮ ಮತ್ತು ಉದಾತ್ತತೆಯ ಸ್ಮಾರಕವಾಗಿದೆ.

ಆಚಾರ್ಯ ಶಂಕರರ ಸಂದೇಶವನ್ನು ಮನೆ-ಮನೆಗಳಿಗೆ ಮುಟ್ಟಿಸಿದ ಶ್ರೀ ಶರ್ಮರವರು, 40ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಅನೇಕ ಪುಸ್ತಕಗಳನ್ನು ಭಾಷಾಂತರಿಸಿದ್ದಾರೆ. ಇವರ ಅತ್ಯಮೂಲ್ಯ ಕೃತಿಗಳಲ್ಲಿ ಒಂದಾದ ಜಗದ್ಗುರು ಶ್ರೀ ಶಂಕರಾಚಾರ್ಯ ಪುಸ್ತಕಕ್ಕೆ ಕರ್ನಾಟಕ ಸರ್ಕಾರ 1958ರಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.